ಬಾಣಂತಿ ಜ್ವರ -
     ಹೆರಿಗೆಯಾದ 10 ದಿವಸಗಳಲ್ಲಿ ಜ್ವರ 38 ಗಿಂತ ಹೆಚ್ಚು ಬಂದು ಅದು 48 ಗಂಟೆಗಳ ಕಾಲಕ್ಕಿಂತ ಹೆಚ್ಚು ಹೊತ್ತು ಉಳಿದಲ್ಲಿ ಅದಕ್ಕೆ ಈ ಹೆಸರಿದೆ. ಹೆರಿಗೆ ಮತ್ತು ಅದಕ್ಕೆ ಸಂಬಂಧಿಸಿದ ಜಾಡ್ಯಗಳು ಅಲ್ಲದೇ ಚಳಿಜ್ವರ, ವಿಷಮಶೀತ ಜ್ವರ, ಫುಪ್ಪುಸದ ಉರಿಯೂತ (ನ್ಯೂಮೋನಿಯಾ), ಕ್ಷಯ ಮೊದಲಾದ ಇತರ ಹಲವು ಕಾರಣಗಳಿಂದ ಇದು ತಲೆದೋರುತ್ತದೆ. ಈ ರೋಗದ ತಿಳಿವಳಿಕೆ ಆಧುನಿಕ ವೈದ್ಯವಿಜ್ಞಾನದ ಪಿತಾಮಹ ಹಿಪಾಕ್ರಟೀಸನಿಗೂ ಇತ್ತು. ಅದರೆ ಆತ ಮಾತ್ರ ಅದು ಹೆರಿಗೆಯ ಶಾಪವೆಂದು ತಪ್ಪಾಗಿ ವಿವರಿಸಿದ್ದ. ಸುಮಾರು 100-150 ವರ್ಷಗಳ ಹಿಂದೆ ವಿಯೆನ್ನಾ ನಗರದಲ್ಲಿ ಸೆಮೆಲ್ ವಿಸ್ ಎಂಬ ವೈದ್ಯ ಕಂಡ ಸಂಗತಿ ಈ ರೋಗದ ಮೇಲೆ ಹೊಸ ಬೆಳಕು ಚೆಲ್ಲಿತು. ಮನೆ ಹೆರಿಗೆಗಳಲ್ಲಿ ಇದರ ಪ್ರಮಾಣ ಆಸ್ಪತ್ರೆ ಹೆರಿಗೆಗಳಿಗಿಂತ ಕಡಿಮೆ ಇದ್ದುದನ್ನು ಆತ ಗಮನಿಸಿದ. ಅನಂತರ ಬಹಳಷ್ಟು ದೀರ್ಘಾಭ್ಯಾಸ ಮತ್ತು ಪರಿಶ್ರಮದಿಂದ ಇದು ಸೋಂಕುರೋಗ ಎಂಬ ಅಂಶವನ್ನು ಶೋಧಿಸಿದ, ಅವನು ಕ್ಲೋರಿನ್ಯುಕ್ತ ಸುಣ್ಣದ ತಿಳಿನೀರಿನಿಂದ ಕೈತೊಳೆಯುವ ಪದ್ಧತಿಯನ್ನು ಆರಂಭಿಸಿ ಹೆರಿಗೆಗೆ ಮೊದಲೂ ಬಳಿಕವೂ ಇದನ್ನು ಸ್ವತಃ ಪಾಲಿಸುತ್ತಿದ್ದುದಲ್ಲದೆ ಇತರರನ್ನೂ ಅದಕ್ಕಾಗಿ ಬಲವಂತ ಪಡಿಸುತ್ತಿದ್ದ. ಇದರಿಂದಾಗಿ ಬಾಣಂತಿಯರ ಮರಣ ಪ್ರಮಾಣ ಪ್ರತಿಶತ 20 ರಿಂದ 1ಕ್ಕೆ ಇಳಿಯಿತು. ಅವನು ರೂಪಿಸಿದ ತತ್ವಗಳು ಇಂದಿಗೂ ದಾರಿದೀಪಗಳಾಗಿವೆ ನಿಂತಿವೆ.

     ಜನನಾಂಗಗಳ ಸೋಂಕುರೋಗ ಬಾಣಂತಿ ಜ್ವರಕ್ಕೆ ಬಹಳಷ್ಟು ಪ್ರಮುಖ ಕಾರಣ ಹೆರಿಗೆಯಾದ ತರುವಾಯ ಇರುವ ನಿಶ್ಯಕ್ತಿ ಮತ್ತು ಸಾಕಷ್ಟು ಸುಲಭದಲ್ಲಿ ಉಂಟಾಗುವ ಸೋಂಕು ಇವು ಕೂಡ ಪ್ರಬಲ ಕಾರಣಗಳು, ಸಾಮಾನ್ಯವಾಗಿ ಈ ರೋಗ ಯೋನಿ ಮೂಲಕವಾಗಿ ಮೇಲೇರುತ್ತ ಇತರ ಅಂಗಗಳೀಗೆ ಹಬ್ಬುವುದು. ಯೋನಿಮಾರ್ಗ ಸದಾ ಮಿಣಿಜೀವಿ (ಪೂರ್ಣ ನಿರ್ಜಂತುವಾಗಿ) ಇರುವುದೆಂದೇನೂ ಇಲ್ಲ. ಶರೀರದ ಇತರ ಭಾಗಗಳ ಚರ್ಮದಂತೆಯೆ ಇದರಲ್ಲಿ ಸಹ ಬಹಳಷ್ಟು ಮಿಣಿಜೀವಿ ಸೂಕ್ಷ್ಮ ಜಂತುಗಳು ಇರುತ್ತವೆ. ಇವು ಚರ್ಮದ ಆವರಣವನ್ನು ಭೇದಿಸಲಾರವು. ಆದರೆ ಅದರಲ್ಲಿ ಬಿರಿತ ಬಾಯಿಯ ಹತ್ತಿರ ಅಥವಾ ಯೋನಿಮಾರ್ಗದ ಪ್ರವೇಶದ್ವಾರದ ಹತ್ತಿರ ಆಗುವುದು ಸಾಮಾನ್ಯ, ಮಾಸು ಅಂಟಿಕೊಂಡಂತ ಸ್ಥಳವೂ ಹತ್ತು ದಿವಸಗಳ ತನಕ ಹಸಿಯಾಗಿರುವುದರಿಂದ ಅದರ ಮೂಲಕವೂ ಸೋಂಕು ಸಾಧ್ಯ. ಇದಕ್ಕೆ ಪೂರಕವಾಗಿ ಮಾಸುವಿನ ಸಣ್ಣ ತುಂಡುಗಳು ಮತ್ತು ರಕ್ತದ ಕರಣಿಗಳು ಗರ್ಭದಲ್ಲಿ ಉಳಿದಾಗ ರೋಗದ ಕ್ರಿಮಿಗಳಿಗೆ ಅತಿ ಹಿತವಾದ ಪರಿಸರ ಒದಗುತ್ತದೆ. ಕ್ರಿಮಿಗಳು ರೋಗಿಯ ಶರೀರದ ಮೇಲೆ, ಚರ್ಮದ ಮೇಲೆ ಮತ್ತು ಯೋನಿಮಾರ್ಗದಲ್ಲಿ  ಇರುತ್ತವೆ. ಹೆಂಗಸು ಬಸಿರಾಗಿದ್ದಾಗ ತನ್ನ ಗುಪ್ತಾಂಗವನ್ನು ಸ್ವಚ್ಛವಾಗಿ ಇಡದಿದ್ದಲ್ಲಿ ಇಂತ ಕ್ರಿಮಿಗಳು, ಶರೀರವನ್ನು ಮೇಲಿಂದ ಮೇಲೆ ಪರೀಕ್ಷಿಸಿಕೊಳ್ಳುವ ವೇಳೆ, ಯೋನಿಮಾರ್ಗ ತಲುಪಿ ಅಲ್ಲಿಯೆ ಬೆಳೆಯುವ ಸಾಧ್ಯತೆ ಉಂಟು. ಇದಲ್ಲದೆ ಗುದದ್ವಾರದ ಮೂಲಕ ಬರುವ ಕ್ರಿಮಿಗಳು ಯೋನಿಮಾರ್ಗದ ಅತಿಸಾಮೀಪ್ಯದಿಂದ ಅಲ್ಲಿಯೇ ಸೇರಿಕೊಂಡು ಬೆಳೆಯಬಹುದು. ಹಾಗೆಯೇ ಹೆರಿಗೆಗೆ ಸಮೀಪದ ದಿನಗಳಲ್ಲಿ ಸಂಭೋಗ ಇಂತ ಕ್ರಿಮಿಗಳನ್ನು ಗರ್ಭಾಶಯದವರೆಗೆ ತಲುಪಿಸಿ ಸೋಂಕಿನ ತೀವ್ರತೆಯನ್ನು ಹೆಚ್ಚಿಸಬಹುದು.

     ಹೆರಿಗೆಯಲ್ಲಿ ಸಹಾಯ ಮಾಡುವ ವ್ಯಕ್ತಿಗಳು (ವೈದ್ಯ, ದಾಯಿ, ಸೂಲಗಿತ್ತಿ ಇತ್ಯಾದಿ) ತಮ್ಮ ಜೊತೆಗೆ ತಂದ ಕ್ರಿಮಿಗಳನ್ನು ಜನನಾಂಗದಲ್ಲಿ ಸೇರಿಸುವ ಅಚಾತುರ್ಯವೂ ನಡೆಯಬಹುದು. ಕೊಳೆಯಾದ ಕೈ ಮತ್ತು ಉಪಕರಣ ಇದಕ್ಕೆ ಮುಖ್ಯ ಕಾರಣ. ಇಂಥ ವ್ಯಕ್ತಿಗಳ ಪೈಕಿ ಕೆಲವರು ಹಾನಿಕಾರಕ ಕ್ರಿಮಿಗಳನ್ನು ತಮ್ಮ ಮೂಗು ಗಂಟಲು ಶ್ವಾಸಕೋಶ ಇತ್ಯಾದಿ ಭಾಗಗಳಲ್ಲಿ ಹೊತ್ತವರಾಗಿರಬಹುದು. ಆದರೆ ಇವರಿಗೆ ಮಾತ್ರ ಇವು ಏನನ್ನೂ ಮಾಡುವುದಿಲ್ಲ. ತಮ್ಮ ಶ್ವಾಸೋಚ್ಛ್ವಾಸ ಕೆಮ್ಮು ಮೊದಲಾದ ಪದ್ಧತಿಗಳಿಂದ ಇವರು ಈ ಕ್ರಿಮಿಗಳ ಹರಡುವಿಕೆಗೆ ಸಹಾಯಕರಾಗುತ್ತಾರೆ. ನೊಣ ಮತ್ತು ಬೇರೆ ಕೀಟಗಳು ರೋಗಾಣುಗಳನ್ನು ಸ್ಥಳಾಂತರಿಸುವುದರಲ್ಲಿ ನೆರವಾಗುತ್ತವೆ. ಬಾಣಂತಿಯರ ಸಾಮಾನ್ಯ ಸ್ರಾವದ ಮೂಲಕ ಉಂಟಾಗುವ ನಿಃಶಕ್ತಿಯಿಂದ ಕ್ರಿಮಿಗಳು ಬೆಳೆಯಲು ಹೆಚ್ಚು ಸಹಾಯವಾಗುತ್ತದೆ.

    ಹೀಗಿದ್ದರೂ ಪ್ರತಿಯೊಂದು ಬಾಣಂತಿಗೂ ಈ ಸೋಂಕು ತಗಲದಂತೆ ನೈಸರ್ಗಿಕ ರಕ್ಷೆ ಉಂಟು, ಬಾಣಂತಿಯ ಆರೋಗ್ಯ ಮತ್ತು ನಿರೋಧ ಸಾಮಥ್ರ್ಯ, ಸುಲಭ ಮತ್ತು ಸುಲಲಿತ ಹೆರಿಗೆ, ಯುಕ್ತ ವೇಳೆಯಲ್ಲಿ ತೂಗುಬಟ್ಟಲು (ಪೊರೆ, ಮೆಂಬ್ರೇನ್) ಒಡೆಯುವುದು ಮತ್ತು ಹೆರಿಗೆಯ ತರುವಾಯ ಬರುವ ನೀರಿನ ಪ್ರವಾಹ ಯೋನಿಮಾರ್ಗದಲ್ಲಿಯ ಕ್ರಿಮಿಗಳನ್ನು ಕೊಚ್ಚಿಕೊಂಡು ಹೋಗುವುದು ಅಲ್ಲದೆ ಬಹಳಷ್ಟು ಕ್ರಿಮಿಗಳು ನಿರಪಾಯಕಾರಿ ಆಗಿರುವುದೂ ಉಂಟು.

    ಬಾಣಂತಿ ಜ್ವರ  ಕಾಣಿಸಿಕೊಳ್ಳುವ ವಿಶೇಷ ಸಂದರ್ಭಗಳು ಹೀಗಿವೆ:
1. ರಕ್ತಹೀನತೆ, ರಕ್ತಸ್ರಾವ ಮತ್ತು ಶಾರೀರಿಕ ದೌರ್ಬಲ್ಯ.
2. ಕಷ್ಟದ ಹೆರಿಗೆ ಮತ್ತು ಪೂರಕ ಕ್ರಮಗಳು
3. ಗರ್ಭಜಲ ಅಕಾಲದಲ್ಲಿ ಸೋರಿ ಹೋಗುವುದು (ತೂಗುಬಟ್ಟಲಿನ ಅಥವಾ ಪೊರೆಯ ಅಕಾಲ ಛೇದನ)
4. ಹೆರಿಗೆಗೆ 12-13 ಗಂಟೆಗಳ ಮೊದಲೇ ಗರ್ಭ ಪೊರೆ ಸರಿದಿರುವುದು.
5. 2 ಗಂಟೆಗಳಿಗೂ ಕಡಿಮೆ ಅವಧಿಯಲ್ಲಿ ಜನನಾಂಗಗಳಲ್ಲಿ ಬಿರಿತ ಹಾಗೂ ಕೊರೆತ
6. ಮಾಸು ಅಥವಾ ಪರೆ ಉಳಿದುಕೊಳ್ಳುವುದು ಮತ್ತು ಅವನ್ನು ತೆಗೆಯಲು ಬೇಕಾದ ಕ್ರಮಗಳು

   ಸೋಂಕಿನ ಕ್ರಿಮಿಗಳ ಮೂಲಕ ಬರುವ ಉರಿಯೂತ ಜನನಾಂಗಗಳ ಎಲ್ಲ ಭಾಗವನ್ನೂ ಕ್ರಮವಾಗಿ ವ್ಯಾಪಿಸುತ್ತದೆ. ಇದರ ಪ್ರಮಾಣ ಹಾಗೂ ರೋಗಿಯ ಅನಾರೋಗ್ಯ ಇವು ಇದರ ವ್ಯಾಪ್ತಿಯನ್ನು ನಿರ್ಧರಿಸುತ್ತವೆ.
ರೋಗ ಲಕ್ಷಣಗಳು:
1. ಜ್ವರ, ಸೋಂಕಿನ ಪ್ರಮಾಣ ಅನುಸರಿಸಿ 38 — 40 ವರೆಗೆ ಇರುತ್ತದೆ. ಜ್ವರ ಬರುವಾಗ ಚಳಿ ಹಾಗೂ ಜ್ವರ ಇಳಿಯುವಾಗ ಬೆವರು ಇರಬಹುದು ಅಥವಾ ಸತತವಾಗಿ ಜ್ವರ ಇರಬಹುದು.
2. ಹೊಲೆ (ಲೋಕಿಯ) ಹೆರಿಗೆ ಬಳಿಕ ಗರ್ಭಕೋಶದಿಂದ ಬರುವ ಸ್ರಾವವೇ ಹೊಲೆ, ಇದಕ್ಕೆ ಹೊಲಸು ವಾಸನೆ ಉಂಟಾಗಿ ಇದರ ಪ್ರಮಾಣ ಹೆಚ್ಚುತ್ತದೆ. ಅದರಂತೆ ಬಣ್ಣ ಕೂಡ ಬಿಳಿಹಳದಿ (ಕೀವಿನಂತೆ) ಆಗುವುದು. ಕೆಲಸಂದರ್ಭದಲ್ಲಿ ಜ್ವರದ ತೀವ್ರತೆಯಲ್ಲಿ ಇದು ಒಣಗಿ ಹೋಗುವುದೂ ಸಾಧ್ಯ. 
3. ನೋವು: ಜನಾನಾಂಗಗಳಲ್ಲಿ ಬಿರಿತ ಉಂಟಾದಲ್ಲಿ ಅದರಂತೆ ಹರಿದ ಭಾಗವನ್ನು ಕೂಡಿಸಿ ಹೊಲಿಗೆಗಳಲ್ಲಿ ಸಿಡಿಯುವ ಅಥವಾ ಸೆಳೆತದ ನೋವು ಕಂಡುಬರುವುದು. ಕಿಬ್ಬೊಟ್ಟೆಯಲ್ಲಿ ಸದಾಕಾಲ ತೀವ್ರ ನೋವು ಈ ರೋಗ ಉಲ್ಬಣಗೊಂಡದ್ದನ್ನು ತಿಳಿಸುತ್ತದೆ.
4. ಹೊಟ್ಟೆ ಬಿಗಿತ: ಗರ್ಭಾಶಯದ ಹೊರೆಪೊರೆಗೆ (ಪೆರಿಟೊನಿಯಂ) ಊತ ಬಂದಲ್ಲಿ ಕರುಳಿನ ಕ್ರಿಯೆ ಮಂದವಾಗಿ ಹೊಟ್ಟೆ ಉಬ್ಬರಿಸುತ್ತದೆ. ಹೀಗಾದಾಗ ವಾಂತಿ ಆಗುತ್ತದೆ. ಹಾಗೂ ಅಪಾನವಾಯು ಕಟ್ಟಿಕೊಳ್ಳುತ್ತದೆ. ಇದು ರೋಗಿಯ ಸ್ಥಿತಿ ತೀವ್ರವಾಗಿರುವುದರ ಸೂಚನೆ.

ಗುರುತಿಸುವ ವಿಧಾನ: ಜ್ವರ ಮತ್ತು ಹೊಲೆ ಇವುಗಳ ಕಡೆಗೆ ಗಮನ ಹರಿಸಬೇಕು. ಗರ್ಭಚೀಲದ ಅಕುಂಚನದ ಪ್ರಮಾಣ ಕಡಿಮೆ ಆದಲ್ಲಿ ಈ ರೋಗವನ್ನು ಪ್ರಥಮ ಹಂತದಲ್ಲಿ ಗುರುತಿಸಬಹುದು. ಸೌಲಭ್ಯವಿದ್ದಲ್ಲಿ ಯೋನಿಮಾರ್ಗದಲ್ಲಿಯ ಕ್ರಿಮಿಗಳನ್ನು ಆಯ್ದು ಪ್ರಯೋಗಶಾಲೆಯಲ್ಲಿ ಬೆಳೆಸಿ, ತಳಿ ಗುರುತಿಸಿ ಯುಕ್ತವಾದ ಪ್ರತಿಜೈವಿಕಗಳನ್ನು (ಆ್ಯಂಟಿಬಯಾಟಿಕ್ಸ್) ಕೊಡುವುದು ಉತ್ತಮ ನಿರ್ವಹಣೆ ಸರಿಯಾದ ಪ್ರಸೂತಿಪೂರ್ವ ಚಿಕಿತ್ಸೆ. ಇಲ್ಲಿ ಬಸುರಿಯರ ಆರೋಗ್ಯ ಮತ್ತು ರಕ್ತದ ಪ್ರಮಾಣ ಪರೀಕ್ಷೆ ಹಾಗೂ ಹೆರಿಗೆಯ ಬಗ್ಗೆ ಪೂರ್ವ ಸೂಚನೆ ಮತ್ತು ಯುಕ್ತ ಉಪಚಾರ ಅವಶ್ಯ. 

1. ಪ್ರಸೂತಿ ವೇಳೆ ಜಾಗರೂಕತೆ : ಇಲ್ಲಿ ಜನನಾಂಗಗಳ ಸ್ವಚ್ಛತೆ ಗುದದ್ವಾರದ ಆಂತರಿಕ ಶುದ್ಧಿ, ಕ್ರಿಮಿರೋಧಕ ದ್ರವ್ಯಗಳ ಬಳಕೆ ಅಗತ್ಯವಿದ್ದಾಗ ಮಾತ್ರ ಒಳ ಪರೀಕ್ಷೆ ಕ್ರಿಮಿಮುಕ್ತ ಉಪಕರಣಗಳು, ವೈಯಕ್ತಿಕ ಹಾಗೂ ದಾಯಿ ಮೊದಲಾದದವರ ಸ್ವಂತ ಶುಚಿತ್ವ, ರಕ್ತಸ್ತಾವದ ಪ್ರಮಾಣ ಕಡಿಮೆ ಮಾಡುವುದು — ಇವು ಮುಖ್ಯವಾದವು.
2. ಪ್ರಸವೋತ್ತರ ಚಿಕಿತ್ಸೆ: ಇಲ್ಲಿ ಕೂಡ ಕ್ರಿಮಿಮುಕ್ತ ವಿಧಾನ ಸರ್ವವಿಧದ ಶುಚಿತ್ವ ಹಾಗೂ ಕ್ರಿಮಿರೋಧಕಗಳ ಬಳಕೆ ಇವು ಅವಶ್ಯ.
3. ರೋಗ ವಾಹಕರು: ಸೋಂಕನ್ನು ಹೊತ್ತು ತಿರುಗುವ ವಾಹಕರನ್ನು ಪ್ರಸೂತಿ ಗೃಹದಿಂದ ಪ್ರಸವೋತ್ತರ ಚಿಕಿತ್ಸೆಯ ವಿಭಾಗದಿಂದ ದೂರ ಇಡಬೇಕು.

ಉಪಚಾರ: ಇಂಥ ಸೋಂಕು ಬಂದ ರೋಗಿಯನ್ನು ಬೇರೆ ಇರಿಸಬೇಕು, ಇಲ್ಲವಾದರೆ ರೋಗ ಇತರರಿಗೂ ತಗಲಬಹುದು. ರೋಗಿಯ ಪರೀಕ್ಷೆಗೆ ಮೊದಲು ಹಾಗೂ ಆನಂತರ ವೈದ್ಯ ಮತ್ತು ಸಂಬಂಧಿಸಿದ ಸಿಬ್ಬಂದಿ ಕೈಗಳನ್ನು ಸ್ವಚ್ಛವಾಗಿ ತೊಳೆದು ಕ್ರಿಮಿನಾಶಕ ದ್ರಾವಣದಲ್ಲಿ ಅದ್ದಬೇಕು. ರೋಗಿಗೆ ಅವಶ್ಯಕವಾಗುವ ನಿದ್ರೆ ಮತ್ತು ಆಹಾರ ಇವುಗಳ ಕಡೆಗೆ ಲಕ್ಷ್ಯ ಕೊಡಬೇಕು. ಆಹಾರ ಮತ್ತು ನೀರು ದಕ್ಕದೇ ಹೋದರೆ ರಕ್ತನಾಳಗಳ ಮೂಲಕ ಪೂರಕ ದ್ರವ್ಯಗಳನ್ನು ಕೊಡಬೇಕು. ರಕ್ತಹೀನತೆಯನ್ನು ರಕ್ತದಾನದ ಮೂಲಕ ಪರಿಹರಿಸಬೇಕು. ಕ್ರಿಮಿನಾಶಕ ದ್ರವ್ಯಗಳನ್ನು ಬಳಸಿ ಸಂಯುಕ್ತವಾದ ಪ್ರತಿಜೈವಿಕಗಳನ್ನು ಕೊಡಬೇಕು. ಕೀವು ತುಂಬಿಕೊಂಡು ಎಲ್ಲಿಯಾದರೂ ಗಡ್ಡೆಯಾಗಿದ್ದರೆ ಅದನ್ನು ಶಸ್ತ್ರಚಿಕಿತ್ಸೆಯ ಮೂಲಕ ಬಸಿಯುವಂತೆ ಮಾಡಬೇಕು. ಬಾಣಂತಿ ಜ್ವರಕ್ಕೆ ಇನ್ನೊಂದು ಮುಖ್ಯವಾದ ಕಾರಣ ಮೂತ್ರದ ದೋಷ. ಹೆರಿಗೆಯ ವೇಳೆ ಮೂತ್ರಾಶಯ ಮತ್ತು ಮೂತ್ರನಾಳ ಮಗುವಿನ ತಲೆ, ತಾಯಿಯ ಸೊಂಟ ಇವುಗಳ ಮಧ್ಯದಲ್ಲಿ ಸೇರಿಕೊಂಡು ಜಜ್ಜಿ ಘಾಸಿಗೊಳ್ಳುತ್ತವೆ. ಇದರ ಪ್ರಮಾಣ ಹೆರಿಗೆಗೆ ಬೇಕಾದ ಅವಧಿ ಮತ್ತು ಮಗುವಿನ ತಲೆಯ ಗಾತ್ರ ಇವನ್ನು ಅವಲಂಬಿಸಿದೆ. ಹೀಗೆ ಮೂತ್ರನಾಳ ಗಾಸಿಗೊಂಡಾಗ ಮೂತ್ರವಿಸರ್ಜನೆ ಕಷ್ಟವಾಗಿ ಮೂತ್ರಾಶಯದಲ್ಲಿ ಮೂತ್ರ ಕಟ್ಟಿಕೊಳ್ಳುತ್ತದೆ. ಈ ತೆರನಾಗಿ ಸಂಗ್ರಹಿತವಾದ ಮೂತ್ರದಲ್ಲಿ ಕ್ರಿಮಿಗಳು ಬೆಳೆಯಲು ಅವಕಾಶ ಒದಗುತ್ತದೆ. ಕಟ್ಟಿಕೊಂಡ ಮೂತ್ರವನ್ನು ತೆಗೆಯಲು ಉಪಯೋಗಿಸುವ ತೂರುನಳಿಕೆ ಕುರಿತು ಸರಿಯಾದ ಮುಂಜಾಗ್ರತೆ ವಹಿಸದಿದ್ದಲ್ಲಿ ಅದು ಕೂಡ ಸೋಂಕಿಗೆ ಕಾರಣವಾಗುತ್ತದೆ. ಹೆಂಗಸು ಬಸುರಿ ಆಗಿರುವಾಗ ಶರೀರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸ್ರವಿಸುವ ಪ್ರೋಜೆಸ್ಟಿರಾನ್ ಹಾರ್ಮೋನ್ ಮೂತ್ರನಳಿಕೆಯನ್ನು ಹಿಗ್ಗಿಸಿಡುವುದರಿಂದ ಸೋಂಕು ಮೇಲಕ್ಕೆ ಏರಿ ಮೂತ್ರ ಪಿಂಡವನ್ನು ತಲುಪುವುದು. ಹೀಗಾಗಿ ರೋಗ ತೀವ್ರವಾಗುತ್ತದೆ. ಇದಕ್ಕೆ ಕಾರಣೀಭೂತವಾದ ಕ್ರಿಮಿಗೆ ಈ.ಕೋ. ಎಂದು ಹೆಸರು. ದೊಡ್ಡ ಕರುಳಿನಲ್ಲಿ ಇದರ ವಾಸ್ತವ್ಯ. ಇದು ಮೂತ್ರಾಂಗಗಳಲ್ಲಿ ಬೆಳೆಯತೊಡಗಿದಾಗಗ ಉರಿ ಮೂತ್ರ, ಕಿಬ್ಬೊಟ್ಟೆ ನೋವು ಮತ್ತು ತೀವ್ರ ಚಳಿಜ್ವರ ಮುಂತಾದ ಲಕ್ಷಣಗಳು ಕಂಡುಬರುತ್ತವೆ. ಮೂತ್ರವನ್ನು ಸೂಕ್ಷ್ಮ ಪರೀಕ್ಷೆಗೆ ಒಳಪಡಿಸಿದಾಗ ಅದರಲ್ಲಿ ಕೀವುಕೋಶಗಳ ಪ್ರಮಾಣ ಅತಿಯಾಗಿರುವುದು ಕಂಡುಬರುವುದೇ ಇದಕ್ಕೆ ಖಚಿತ ಪರೀಕ್ಷೆ. ಉಪಚಾರ ಉರಿತ ಕಡಿಮೆಯಾಗುವುದು, ಆದರೆ ಅದಕ್ಕೆ ಬೇಕಾಗುವ ಯುಕ್ತ ಪ್ರತಿಜೈವಿಕವನ್ನು ಉಪಯೋಗಿಸಿ ಕ್ರಿಮಿಗಳನ್ನು ಪೂರ್ಣವಾಗಿ ನಾಶ ಮಾಡದಿದ್ದಲ್ಲಿ ಈ ರೋಗ ಬಹಳಷ್ಟು ದಿವಸ ತೊಂದರೆ ಕೊಡುವುದು.

    ಬಾಣಂತಿ ಜ್ವರದ ಇನ್ನೊಂದು ಮುಖ್ಯವಾದ ಕಾರಣವೆಂದರೆ ಸ್ತನಗಳಲ್ಲಿ ಉಂಟಾಗುವ ಊತ, ಮೊಲೆತೊಟ್ಟಿನಲ್ಲಿ ಉಂಟಾಗುವ ಬಿರಿತ ಮತ್ತು ಒಳಸೇರಿದ ಮೊಲೆತೊಟ್ಟು ಇರುವಾಗ ಮಗುವಿಗೆ ಮೊಲೆಯೂಡಿಕೆ ವೇಳೆ ವಿಪರೀತ ವೇದನೆ ಆಗುತ್ತದೆ. ಆಗ ಹಾಲು ಮೊಲೆಯಲ್ಲಿಯೇ ಉಳಿದುಕೊಳ್ಳುತ್ತದೆ. ಕ್ರಿಮಿಗಳು ಬೆಳೆಯಲು ಹಾಲು ತುಂಬ ಪೌಷ್ಟಿಕ ಮಾಧ್ಯಮ. ಹೀಗಾಗಿ ಒಳಸೇರಿದ ಕ್ರಿಮಿಗಳು ಬಹಳಷ್ಟು ವೇಗವಾಗಿ ಬೆಳೆಯುತ್ತವೆ. ಆಗ ಸ್ತನಗಳಲ್ಲಿ ಉರಿಯೂತ ಉಂಟಾಗಿ ಕೀವು ಆಗುತ್ತದೆ. ಮೊಲೆಯಲ್ಲಿ, ಬಿಗಿತ, ಸೆಳೆತ, ಹೊಡೆತ, ನೋವು ತೀವ್ರಜ್ವರ ಇವು ಈ ರೋಗದ ಮುಖ್ಯ ಲಕ್ಷಣಗಳು. ಇಂಥ ಮೊಲೆಯಲ್ಲಿ ಕುರು ಇದ್ದಾಗ ಆ ಭಾಗ ಗಟ್ಟಿಯಾಗಿ ಬಿಗಿದುಕೊಂಡಿರುವುದು. ಚರ್ಮದ ಕಡೆಗೆ ಕುರು ಸಾಗಿದಂತೆ ಚರ್ಮ ಕೆಂಪಾಗುವುದು. ಮೊಲೆ ಕುಡುಸುವುದು ಅಸಾಧ್ಯವಾಗಿ ರೋಗ ಒಳಗೆಯೇ ಬಲಿಯುತ್ತ ಹೋಗುತ್ತದೆ. ಕೆಲವು ಸಲ ಕುರು ತಾನಾಗಿಯೇ ಒಡೆದು ಕೀವು ಸ್ವಲ್ಪವೇ ಸೋರಿಹೋಗುವುದು. ಆದರೆ ಕ್ರಿಮಿಗಳು ಒಳಗೆ ಉಳಿಯುವುದರಿಂದ ಮತ್ತೆ ಮತ್ತೆ ಕುರು ಆಗುತ್ತಿರುವುದು.

    ಪ್ರತಿಬಂಧಕ ಉಪಾಯಗಳಲ್ಲಿ ಕೆಳಗಿನವು ಮುಖ್ಯ:
1. ಬಸುರಿಯನ್ನು ಪರೀಕ್ಷೆ ಮಾಡುವಾಗ ಮೊಲೆತೊಟ್ಟನ್ನು ಪರೀಕ್ಷಿಸಿ ಅಲ್ಲಿದ್ದ ಬಿರಿತಗಳನ್ನು ಸರಿಯಾದ ಲೇಪನಗಳಿಂದ ಉಪಚರಿಸಬೇಕು. 
2. ಬಿರಿತವಿಲ್ಲದಿದ್ದಲ್ಲಿ ತೊಟ್ಟನ್ನು ಪ್ರತಿದಿವಸ ಎರಡು ಸಲ ಉಗುರುಬೆಚ್ಚಗಿನ ನೀರು ಹಾಕಿ ತೊಳೆಯಬೇಕು. 
3. ತೊಟ್ಟು ಒಳಸೇರಿದ್ದರೆ ಅದನ್ನು ಮತ್ತೆ ಮತ್ತೆ ಹಿಡಿದು ಎಳೆಯುವಂತೆ ತಿಳುವಳಿಕೆ ಕೊಡಬೇಕು.
4. ಬಾಣಂತಿಯರಲ್ಲಿ ಬಿರಿತ ಅಥವಾ ಒಳಸೇರಿದ ತೊಟ್ಟು ಕಂಡುಬಂದಲ್ಲಿ ಮಗುವಿಗೆ ಹಾಲನ್ನು ತೊಟ್ಟಿನ ಕವಚ ಉಪಯೋಗಿಸಿ ಕುಡಿಸಬೇಕು. ಅದು ಸಾಧ್ಯವಾಗದಿದ್ದಲ್ಲಿ ಹಾಲನ್ನು ಕೈಯಿಂದ ಹಿಂಡಿ ಮೊಲೆಯನ್ನು ಖಾಲಿ ಮಾಡಬೇಕು.

   ಒಮ್ಮೆ ಮೊಲೆ ಕುರುವಾದರೆ ಶಾಖ ಕೊಟ್ಟು ಅದನ್ನು ಮಾಗಿಸಬೇಕು. ಹದವಾದ ಕುರುವನ್ನು ಕುಯ್ದು ಕೀವನ್ನು ಬಸಿಯಬೇಕು. ಗಾಯ ಮಾಯುವತನಕ ಅದಕ್ಕೆ ಅವಶ್ಯವಾದ ಪಟ್ಟಿಯನ್ನು ಹಾಕಬೇಕು. ಸ್ತನವನ್ನು ಸರಿಯಾದ ಮೊಲೆಕಟ್ಟಿನಿಂದ ಎತ್ತಿಕಟ್ಟಬೇಕು. ಪ್ರತಿಜೈವಿಕವನ್ನು ಸರಿಯಾಗಿ ಉಪಯೋಗಿಸಿದಲ್ಲಿ ಗಾಯ ಮಾಯಲು ಸಹಾಯಕವಾಗುತ್ತದೆ.

    ಬಾಣಂತಿ ಜ್ವರದ ಬೇರೆ ಕಾರಣಗಳಲ್ಲಿ ಅಭಿಧಮನಿಗಳ ಉರಿಯೂತವೂ ಸೇರಿದೆ. ಕ್ರಿಮಿಗಳು ರಕ್ತನಾಳಕ್ಕೆ ಹಬ್ಬಿ ಅಲ್ಲಿ ರಕ್ತ ಗಡ್ಡೆಕಟ್ಟಿ ರಕ್ತಪ್ರವಾಹಕ್ಕೆ ತಡೆ ಉಂಟಾಗುತ್ತದೆ. ಇದು ಮುಖ್ಯವಾಗಿ ಕಾಲಿನಲ್ಲಿ ಕಂಡುಬರುವುದು. ಕಾಲುನೋವು ಕಾಲಿನ ಊತ ಮತ್ತು ರಕ್ತದ ಅಭಾವದಿಂದ ಬಿಳಚಿಕೊಂಡ ಕಾಲು ಮೇಲಿಂದ ಮೇಲೆ ಬರುವ ಚಳಿ ಮತ್ತು ಒಮ್ಮೆಲೇ ಏರಿ ಇಳಿಯುವ ಜ್ವರ ಇವು ಇದರ ಮುಖ್ಯ ಲಕ್ಷಣಗಳು, ಬಾಣಂತಿ ಜ್ವರದ ಪರಿಣಾಮ ಕೆಲವು ಸಲ ಆಕ್ಸಿಜನ್ನಿನ ಪೂರೈಕೆಗೆ ವ್ಯತ್ಯಯವನ್ನು ಉಂಟು ಮಾಡುತ್ತವೆ.  ಇದರಿಂದ ಮರಣವೇ ಸಂಭವಿಸಬಹುದು. ಈ ರೋಗಕ್ಕೆ ರೋಗಿಯನ್ನು ಕಟ್ಟುನಿಟ್ಟಾಗಿ ಮಲಗಿಸಿ ಕಾಲನ್ನು ಎತ್ತಿಕಟ್ಟಿ ಕಾಲಿಗೆ ಒತ್ತುವ ಪಟ್ಟಿಯನ್ನು ಕಟ್ಟಿ ರಕ್ತ  ಪ್ರವಾಹಕ್ಕೆ ಅನುವು ಮಾಡಿಕೊಡಲಾಗುತ್ತದೆ.

    ಮೆದುಳಿನ ರಕ್ತನಾಳಗಳಿಗೂ ಕೂಡ ಈ ಕುರುಗಡ್ಡೆಗಳು ತಲುಪಿ ಸಂಬಂಧಿಸಿದ ನರಗಳಿಗೆ ರಕ್ತ ಕಡಿತಗೊಳಿಸುತ್ತದೆ. ಆಗ ಪರ್ಯಾಯವಾಗಿ ನರಗಳ ದೌರ್ಬಲ್ಯ, ಲಕ್ವ ಹೊಡೆಯುವ ಸಾಧ್ಯತೆಯಿದೆ. ಇದು ಶಾಶ್ವತ ಊನವಾಗಿ ಪರಿಣಮಿಸಬಹುದು.

    ಬಾಣಂತಿಯನ್ನು ತೀರ ಹಾಸಿಗೆಯಲ್ಲಿಯೇ ದಿನಗಟ್ಟಲೇ ಮಲಗಲು ಬಿಡುವುದರಿಂದ ಈ ತೊಂದರೆ ಸಂಭವಿಸುತ್ತದೆ. ಬದಲಾಗಿ ನಾಲ್ಕಾರು ಗಂಟೆಗಳ ವಿಶ್ರಾಂತಿಯ ಬಳಿಕ ಹಗುರಾಗಿ ಓಡಾಡಲು, ಮೂತ್ರ ವಿಸರ್ಜನೆ ಮಾಡಲು ಉತ್ತೇಜಿಸಬೇಕು; ಹೆಚ್ಚಿನ ದ್ರವಾಹಾರವೂ ಈ ತೊಂದರೆ ತಡೆಗಟ್ಟುವಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಇತ್ತೀಚೆಗೆ ಹೆಚ್ಚಿನ ಸಿಝೇರಿಯನ್ ಹೆರಿಗೆಗಳಲ್ಲಿ ಹೊಟ್ಟೆಯ ಮೇಲೆ ಹೊಲಿಗೆ ಹಾಕಲಾಗಿರುತ್ತದೆ. ಅಲ್ಲಿ ರಕ್ತ ಕಟ್ಟಿಕೊಳ್ಳುವುದೂ ಕೀವುತುಂಬುವುದೂ ಕೂಡ ಬಾಣಂತಿ ಜ್ವರಕ್ಕೆ ಕಾರಣ. ಕೀವುತೆಗೆದು ಮತ್ತೆ  ಹೊಲಿಗೆ ಹಾಕಬೇಕಾಗಬಹುದು. ಅರವಳಿಕೆ ನೀಡುವಾಗ ಉಸಿರ್ನಾಳಕ್ಕೆ ಆಮ್ಲಜನಕ ಪೂರೈಕೆ ಮಾಡಲು ಕೊಳವೆ ಸಿಕ್ಕಿಸಿರುತ್ತಾರೆ. ಮುಂದೆ ಕೆಲಬಾರಿ ಅವರಿಗೆ ಶ್ವಾಸಕೋಶದ ಉರಿಯೂತ, ಕೆಮ್ಮು ಕಾಣಿಸುವುದು ಅಪರೂಪವಲ್ಲ. ಇದನ್ನು ಪಟ್ಟಿಯಲ್ಲಿ ಗಮನಿಸಬೇಕು. ಶಸ್ತ್ರಚಿಕಿತ್ಸೆಗೊಳಗಾದವರನ್ನು ಎರಡನೇ, ಮೂರನೇ ದಿನವೇ ಓಡಾಡಲು ಅನುಗೊಳಿಸಬೇಕು. ಇದರಿಂದ ಮುಂದೆ ಆಗುವ ಅನಾಹುತಗಳನ್ನು ಸುಲಭವಾಗಿ ದೂರ ಇಡಬಹುದು.
ಪರಿಷ್ಕರಣೆ:

ಡಾ|| ಇಂದಿರಾ ಎಸ್. ಪ್ರಸಾದ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ